ಶಂಕರಭಟ್ಟ, ಕಡೆಂಗೋಡ್ಲು
 	1904-68. ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಾದಂಬರಿಕಾರ, ಕಥೆಗಾರ, ವಿಮರ್ಶಕ ಹಾಗೂ ಪತ್ರಕರ್ತರು ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಾಯಿ ಗ್ರಾಮದಲ್ಲಿ 1904 ಆಗಸ್ಟ್ 9ರಲ್ಲಿ ಜನಿಸಿದರು. ತಂದೆ ಈಶ್ವರಭಟ್ಟ, ತಾಯಿ ಗೌರಮ್ಮ, ಕುಟುಂಬದ ಪ್ರಧಾನ ವೃತ್ತಿ ಕೃಷಿ. ಕನ್ನಡ ಸಾಹಿತ್ಯದ ಹಿರಿಯ ಸಂಶೋಧಕ ಮುಳಿಯ ತಿಮ್ಮಪ್ಪಯ್ಯ ಇವರ ಬಂಧುಗಳಾದ್ದರಿಂದ ಇವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಜೊತೆಗೆ ಉತ್ಕøಷ್ಟ ಸಾಹಿತ್ಯದ ಪರಿಸರವೂ ಲಭ್ಯವಾಯಿತು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಂತ ಹಳ್ಳಿಯಲ್ಲಿಯೇ ಪಡೆದು ಹೈಸ್ಕೂಲಿನ ಶಿಕ್ಷಣವನ್ನು ಮಂಗಳೂರಿನ ಕೆನರಾ ಶಾಲೆಯಲ್ಲಿ ಪಡೆದರು. ಕೆನರಾ ಹೈಸ್ಕೂಲಿನ ಇಂಗ್ಲಿಷ್ ಅಧ್ಯಾಪಕ ರಾಗಿದ್ದ ಅಚ್ಯುತ ಬಾಳಿಗರು, 1920ರಲ್ಲಿ ಮಂಗಳೂರಿನಲ್ಲಿ ನಡೆದ ಗಾಂಧೀಜಿಯವರ ಸತ್ಯಾಗ್ರಹ ಸಂದೇಶ, ದಕ್ಷಿಣಕನ್ನಡದ ಕಾರ್ನಾಡ್ ಸದಾಶಿವರಾಯರ ಸ್ವಾತಂತ್ರ್ಯ ಹೋರಾಟದ ಆದರ್ಶ-ಈ ಎಲ್ಲದರ ಪ್ರಭಾವಗಳಿಂದ ಇವರ ದೇಶಾಭಿಮಾನ ಉದ್ದೀಪನಗೊಂಡು ಶಾಲಾ ಶಿಕ್ಷಣವನ್ನು ಬಿಟ್ಟು ರಾಜಕೀಯ ಆಂದೋಲನಕ್ಕೆ ದುಮುಕಿ ಸತ್ಯಾಗ್ರಹದಲ್ಲಿ ಇವರು ಸ್ವಯಂಸೇವಕರಾಗಿ ಭಾಗವಹಿಸುವಂತಾಯಿತು. ಅನಂತರ ಧಾರವಾಡದ ಶಿಕ್ಷಣ ಸಮಿತಿಯ ಸ್ನಾತಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು.

	ಕಾರ್ನಾಡ್ ಸದಶಿವರಾಯರು ಸ್ಥಾಪಿಸಿದ್ದ ಮಂಗಳೂರಿನ ರಾಷ್ಟ್ರೀಯ ಪಾಠಶಾಲೆ ತಿಲಕವಿದ್ಯಾಲಯದಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿ ಅನೇಕ ವರ್ಷಗಳು ಸೇವೆ ಸಲ್ಲಿಸಿದರು. ಅನಂತರ ಮಂಗಳೂರಿನ ಸೇಂಟ್ ಆಗ್ನೇಸ್ ಮಹಿಳಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (1929-64) ಸೇವೆ ಸಲ್ಲಿಸಿದರು. ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವನ್ನು ಗಾಢವಾಗಿ ಉದ್ದೀಪಿ ಸುವುದು ಇವರ ಅಧ್ಯಾಪನ ವೃತ್ತಿಯ ಒಂದು ಅಂಗವಾಗಿತ್ತು.

	ಪತ್ರಿಕೋದ್ಯಮದಲ್ಲಿಯೂ ಅಪಾರ ಒಲವಿದ್ದ ಇವರು ಮಂಗಳೂರಿನ ನವಯುಗವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ (1926-28) ರಾಷ್ಟ್ರ ಬಂಧು ವಾರ ಪತ್ರಿಕೆಯ ಪ್ರಥಮ ಸಂಪಾದಕರಾಗಿ (1928-53) ಸೇವೆ ಸಲ್ಲಿಸಿದರು. ರಾಷ್ಟ್ರಮತ ವಾರಪತ್ರಿಕೆಯನ್ನು ಸ್ವತಃ ಆರಂಭಿಸಿ ತಮ್ಮ ಜೀವನದ ಕೊನೆಯವರೆಗೂ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.

	ಕಾವ್ಯ, ನಾಟಕ, ಕಾದಂಬರಿ, ಸಣ್ಣಕಥೆ, ವಿಮರ್ಶೆ, ಲಲಿತ ಪ್ರಬಂಧ ಮೊದಲಾದ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ರಚಿಸಿದ ಕೀರ್ತಿ ಇವರದು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಬರೆದ ಘೋಷಯಾತ್ರೆ (1920), ಮಹಾಭಾರತದ ಘೋಷಯಾತ್ರೆಯ ಕಥೆಯ ಆಧಾರದ ಮೇಲೆ ಪರಕೀಯರ ಹಿಡಿತಕ್ಕೆ ಸಿಲುಕಿದ್ದ ಭಾರತದ ರಾಜಕೀಯದ ಸ್ಥಿತಿಯನ್ನು ವಿಡಂಬಿಸುವ ಕೃತಿಯಾಗಿದೆ. ಚೌಪದಿ, ಕುಸುಮ ಷಟ್ಪದಿ, ಮಂದಾನಿಲ ರಗಳೆಗಳ ಯಶಸ್ವೀ ಪ್ರಯೋಗ ಈ ಕಾವ್ಯದಲ್ಲಿದೆ. ಗಾಂಧಿ ಸಂದೇಶ (1920), ವಸ್ತ್ರಪಹರಣ (1921), ಕಾಣಿಕೆ (1927), ನಲ್ಮೆ (1932), ಹಣ್ಣುಕಾಯಿ (1933), ಪತ್ರಪುಷ್ಪ (1965) ಇವು ಇವರ ಕಾವ್ಯ ಸಂಗ್ರಹಗಳು. ಶ್ಲೇಷೆ, ಸಮಾಸೋಕ್ತಿಯ ಚಮತ್ಕøತಿ, ಶಬ್ದಜಾಲಗಳಿಂದ ರಾಷ್ಟ್ರ ನಾಯಕರ ಹೆಸರುಗಳನ್ನು ಪ್ರಕಟಿಸುವ ಚಮತ್ಕಾರ ತಂತ್ರ ಈ ಎಲ್ಲ ಕಾವ್ಯಗಳಲ್ಲಿಯೂ ಉದ್ದಕ್ಕೂ ಕಂಡುಬರುತ್ತದೆ. ಇವರ ಮೇಲಾಗಿದ್ದ ಸ್ವಾತಂತ್ರ್ಯ ಹೋರಾಟ, ಗಾಂಧೀ ತತ್ತ್ವಗಳ ಪ್ರೇರಣೆ ಪ್ರಭಾವಗಳು ಇವರ ಕಾವ್ಯಗಳಲ್ಲಿ ದಟ್ಟವಾಗಿವೆ.

	ಮಹಾಯೋಗಿ (1915), ಉಷೆ (1924), ಅಜಾತಶತ್ರು (1927), ಹಿಡಿಂಬೆ (1928), ಯಜ್ಞಕುಂಡ (1932), ವಿರಾಮ (1935), ಗುರುದಕ್ಷಿಣೆ (1953) ಇವು ಇವರ ಪ್ರಮುಖ ನಾಟಕ ಕೃತಿಗಳು. ಧೂಮಕೇತು(1935), ದೇವತಾ ಮನುಷ್ಯ (1947), ಲೋಕದ ಕಣ್ಣು (1948) ಇವು ಇವರ ಸಾಮಾಜಿಕ ಕಾದಂಬರಿಗಳು. ಹಿಂದಿನ ಕಥೆಗಳು (1914), ಗಾಜಿನ ಬಳೆ (1947), ದುಡಿಯುವ ಮಕ್ಕಳು (1953)-ಇವು ಸಣ್ಣಕಥಾ ಸಂಕಲನಗಳು. ವಾಙ್ಮಯ ತಪಸ್ಸು (1963) ಇವರ ಸಾಹಿತ್ಯ ವಿಮರ್ಶೆಯ ಕೃತಿ. ಸ್ವರಾಜ್ಯಯುದ್ಧ (1920) ಎಂಬುದು ನೆಹರೂ ಭಾಷಣದ ಅನುವಾದ. ಇದಲ್ಲದೆ ಇವರ ಅನೇಕ ಲಲಿತ ಪ್ರಬಂಧಗಳು, ಸಂಕೀರ್ಣ ಬರೆಹಗಳು, ಗ್ರಂಥ ವಿಮರ್ಶೆಗಳು, ಕಥೆ, ಕವನಗಳು ಸಾಹಿತ್ಯ ಪತ್ರಿಕೆ ಗಳಲ್ಲಿ ಬಿಡಿಬಿಡಿಯಾಗಿ ಪ್ರಕಟಗೊಂಡಿವೆ. ಇವರ ಬಹಳಷ್ಟು ಕಾದಂಬರಿ, ನಾಟಕಗಳು ಲಭ್ಯವಾಗಿದ್ದರೂ ಅಪ್ರಕಟಿತವಾಗಿವೆ. ಕಡೆಂ ಗೋಡ್ಲು ಶಂಕರಭಟ್ಟ ಜನ್ಮ ಶತಮಾನೋತ್ಸವ ಸಮಿತಿ; ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಉಡುಪಿ-ಇವರು ಇವರ ಸಮಗ್ರ ವಾಙ್ಮಯವನ್ನು ಐದು ಪ್ರತ್ಯೇಕ ಸಂಪುಟಗಳಲ್ಲಿ (ಕಾವ್ಯ, ಕಾದಂಬರಿ, ನಾಟಕ, ಸಣ್ಣಕಥೆ, ಗದ್ಯ ಪ್ರಬಂಧಗಳು) ಇತ್ತೀಚೆಗೆ ಪ್ರಕಟಿಸಿದೆ (2004). 

	ನಲ್ಮೆ ಕಾವ್ಯ ಸಂಕಲನ ಇವರನ್ನು ಕನ್ನಡ ನವೋದಯ ಕಾಲದ ಕಾವ್ಯ ಇತಿಹಾಸದಲ್ಲಿ ಅತ್ಯುತ್ತಮ ಸ್ಥಾನಕ್ಕೇರಿಸಿತು. ಹೊನ್ನಿಯ ಮದುವೆ, ಮಾದ್ರಿಯಚಿತೆ ಮತ್ತು ಮುರಲೀನಾದ ಕಥನ ಕವನಗಳು ಇವರ ಕಾವ್ಯ ಪ್ರತಿಭೆಯ ಉತ್ತಮ ಅಭಿವ್ಯಕ್ತಿಗಳಾಗಿವೆ.

	ಕನ್ನಡದಲ್ಲಿ ತತ್ಸಮ-ತದ್ಭವಗಳು ಎಂಬ ಇವರ ಲೇಖನ ಕನ್ನಡ ಭಾಷಾ ವಿಜ್ಞಾನದ ಅಧ್ಯಯನದ ದೃಷ್ಟಿಯಿಂದ ಬಹಳ ಮುಖ್ಯವಾದ ಸಂಶೋಧನೆಯ ಅಂಶಗಳನ್ನೊಳಗೊಂಡಿದೆ. ಇವರು 1965ರಲ್ಲಿ ಕಾರವಾರದಲ್ಲಿ ನಡೆದ 45ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು 1968 ಮೇ 17 ರಂದು ನಿಧನರಾದರು.		
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ